ಹೇಳದೇ ಹೋದ ವಿದಾಯ

ನಾನೊಬ್ಬ ಭಾವಗಳ ಪರಿಚಯವಿಲ್ಲದ ನಿರ್ಭಾವಿ
ಅವಳೊಂದು ಹೃದಯದ ಮಾತು ನೇರವಾಗಿ ಕಣ್ನಲ್ಲಿ ಹೊಳೆಯುವ ಚಿಲುಮೆ
ಇಬ್ಬರ ನಡುವೆ ಮೂಡಿದೆ ಹೊಸ ಅಧ್ಯಾಯ;
ಹೇಳು… ಯಾಕೆ ನೀ ಬಿಟ್ಟು ಹೋದೆಯೆ? ಹೇಳದೇ ವಿದಾಯ…

ನಮ್ಮ ಜೀವನದಲ್ಲಿ ತುಂಬ ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಬಂದು, ಹೋದರೂ ಹೋಗದಂತಹ ಜನ ಕೆಲವೇ ಮಂದಿ. ಅಂತಹ ಜನರಲ್ಲಿ ಮೊದಲಿಗೆ ಬರುವಳೆ ಈ ಹುಬ್ಬಳ್ಳಿ ಹುಡುಗಿ — ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ, ಆದರೆ ಅವಳ ಹೃದಯದಲ್ಲಿ ಹುಬ್ಬಳ್ಳಿಗೆ ಅಪಾರ ಪ್ರೀತಿ. ಅವಳ ಅಮ್ಮನ ಊರು ಹುಬ್ಬಳ್ಳಿ, ಆ ಕಾರಣದಿಂದಲೇ ಆ ಊರಿನ ಮಾತು, ಜನ, ಸಂಸ್ಕೃತಿ, ಬಿಸಿಲು-ಮಳೆಯೆಲ್ಲವೂ ಅವಳಿಗೆ ಹತ್ತಿರದವು. ಅಮ್ಮನ ಊರೆಲ್ಲರಿಗೂ ನೆಚ್ಚಿನ ತಾಣ ಅಲ್ಲವೆ!


ನಮ್ಮ ಭೇಟಿಯ ಕಥೆ — ಒಂದು ರೋಚಕ ಅಧ್ಯಾಯ. ಒಂದು ಸಂಜೆ ಕೆಲಸ ಮುಗಿಸಿ ಸ್ವಲ್ಪ ವಿಶ್ರಾಂತಿ ಬೇಕೆಂದು ಮನಸ್ಸು ಹಂಬಲಿಸಿತು. ಹೀಗೇ ಕೈಯಲ್ಲಿ ಫೋನ್ ಹಿಡಿದು anonymous app ಓಪನ್ ಮಾಡಿದೆ — ಯಾರು ಗೊತ್ತಿಲ್ಲದವರ ಜೊತೆ ಸ್ವಲ್ಪ ಮಾತುಗಳ ವಿನಿಮಯ, ಮನಸ್ಸಿಗೆ ಹೊಸತಾಗಿತ್ತು. ಹಠಾತ್‌ ಒಂದು “Hi” ಎಂಬ ಮೆಸೇಜ್ ಬಂತು. ಮೊದಲು ಅಷ್ಟು ಗಮನ ಕೊಡಲಿಲ್ಲ, ಆದರೆ ಯಾಕೋ ಆ ಮೆಸೇಜ್‌ನಲ್ಲಿ ಒಂದು ವಿಶಿಷ್ಟತೆ ಇತ್ತು — ಸರಳವಾಗಿದ್ದರೂ, ಹೃದಯಕ್ಕೆ ತಾಕುವಂಥದಾಗಿತ್ತು.

ಮಾತುಗಳು ಸರಳವಾಗಿದ್ದರೂ ಮನಸ್ಸು ಮಾತಾಡಿದಂತಾಗುತ್ತಿತ್ತು. ಇಂಗ್ಲಿಷ್‌ನಲ್ಲಿ ಶುರುವಾದ ಆ ಪರಿಚಯ, ಕೆಲವೇ ಕ್ಷಣಗಳಲ್ಲಿ ಕನ್ನಡದ ಸೊಗಡಿಗೆ ಬದಲಾಗಿತ್ತು — ಅವಳ ನಗುವಿನಂತೆಯೇ ನಿಜವಾದ, ನೇರವಾದ. “ನೀವು ಕನ್ನಡಿಗರಾ?” ಅನ್ನೋ ಒಂದು ಸಾಲು ಬಂದ ಕ್ಷಣ, ಮನಸ್ಸು ಅಂದಿತು — “ಇದು ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಭೇಟಿಯ ಆರಂಭ “. ಆ ರಾತ್ರಿ ಇಂದೇ ನಮ್ಮಿಬ್ಬರ ಮಾತುಗಳು ಆರಂಭವಾದವು — ಸಾಮಾನ್ಯ ಮಾತುಗಳಿಂದ ಭಾವನಾತ್ಮಕ ಬಾಂಧವ್ಯದ ಕಡೆಗೆ ಸಾಗಿದ ಒಂದು ಸುಂದರ ಪ್ರಯಾಣ. ಮಾತು ಮಾತಿನಲ್ಲಿ ಕಾಲ ಹೇಗೆ ಹೋಯ್ತು ಗೊತ್ತಾಗಲಿಲ್ಲ.

ಅವಳು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ಅಂತಿಮ ವರ್ಷದ ವಿದ್ಯಾರ್ಥಿನಿ. ಪ್ಲೇಸ್ಮೆಂಟ್‌ಗಾಗಿ ತುಂಬಾ ಶ್ರಮಿಸುತ್ತಿದ್ದಳು. ಪ್ರತಿಯೊಂದು ಅವಕಾಶವನ್ನೂ ಗಂಭೀರವಾಗಿ ತೆಗೆದುಕೊಂಡು, ತಾನೇನಾದರೂ ಸಾಧಿಸಬೇಕು ಎಂಬ ದೃಢಸಂಕಲ್ಪ ಹೊಂದಿದ್ದಳು. ಒಂದು ಕಂಪನಿಯಲ್ಲಿ ಅವಳು ಮೂರು ರೌಂಡ್‌ಗಳನ್ನು ಯಶಸ್ವಿಯಾಗಿ ಮುಗಿಸಿದ್ದಳು. ಆ ವಿಚಾರ ಕೇಳಿದ ಕ್ಷಣ ನನ್ನ ಮನಸ್ಸು ಸಂತೋಷದಿಂದ ತುಂಬಿತು. ಯಾಕೆಂದರೆ, ಆ ಯಶಸ್ಸಿನ ಹಿಂದೆ ಅವಳ ಪರಿಶ್ರಮ, ಧೈರ್ಯ ಮತ್ತು ಅಚಲ ಮನೋಭಾವವಿತ್ತು. ಅವಳು ಸಾಧನೆ ಮಾಡಿದಾಗ ಅದು ಕೇವಲ ಅವಳ ಜಯವಲ್ಲ — ನನ್ನಿಗೂ ಸಂತೋಷದ ಕ್ಷಣವಾಯಿತು.

ಆದರೆ ಒಂದು ದಿನ, ಹಠಾತ್ ಅವಳು ಕನೆಕ್ಷನ್‌ನ್ನು ಬ್ಲಾಕ್ ಮಾಡಿಬಿಟ್ಟಳು. ಆ ಕ್ಷಣದಲ್ಲಿ ಎಲ್ಲವೂ ನಿಂತಂತಾಯ್ತು. ಆಪ್ತವಾಗಿದ್ದ ಸಂಭಾಷಣೆ, ಪ್ರತಿದಿನದ ನಿರೀಕ್ಷೆ, ಆಕೆಯ ನಗು, ಮಾತುಗಳು — ಎಲ್ಲವೂ ಅಕಸ್ಮಾತ್ ನಿಶ್ಶಬ್ದದೊಳಗೆ ಅಡಗಿಬಿಟ್ಟವು. ಯಾವ ಕಾರಣಕ್ಕೂ ಹೇಳದೇ, ಯಾವುದೋ ಅಜ್ಞಾತ ಅಂತರವು ನಮ್ಮಿಬ್ಬರ ಮಧ್ಯೆ ಮೂಡಿತು.

ಅವಳು ಹೆಸರು ಕೂಡ ಹೇಳಲಿಲ್ಲ, ನಾನೂ ಕೇಳಲಿಲ್ಲ. ಅವಳ ಬೇರೆ ಸಂಪರ್ಕದ ಮಾರ್ಗವನ್ನೂ ತಿಳಿಯಲಿಲ್ಲ. ನಾವು ಭೇಟಿಯಾಗಲಿಲ್ಲ, ಮುಖವನ್ನೂ ನೋಡಲಿಲ್ಲ. ಆದರೂ ಏನೋ ಮನಸ್ಸಿನಲ್ಲಿ ಆಕೆಯ ಅಸ್ತಿತ್ವ ಉಳಿಯಿತು — ನಿಜವಾಗಿಯೂ ಇದ್ದಳೋ ಅಥವಾ ಕಲ್ಪನೆಯೋ ಅನ್ನುವುದು ನನಗೆ ತಿಳಿಯಲಿಲ್ಲ. ನಮ್ಮ ಸಂಬಂಧ ಇದಕ್ಕಿಂತ ಹೆಚ್ಚು ಎಂಬ ಭ್ರಮೆಯೇ ಇರಬಹುದೇ? ಅಥವಾ ಅದು ನಿಜವಾಗಿಯೂ ಯಾವುದೋ ಅಜ್ಞಾತ ಬಾಂಧವ್ಯವಾಗಿತ್ತೇ?

ಪರಿಚಯವಾದ ಸ್ನೇಹಕ್ಕೆ “ಪ್ರೀತಿ” ಎನ್ನಬಹುದು, ಆದರೆ ಪರಿಚಯವೇ ಇಲ್ಲದ ಸ್ನೇಹಕ್ಕೆ ಏನು ಹೆಸರು ನೀಡಬೇಕು? ಬಹುಶಃ ಅದನ್ನೇ “ಮನಸ್ಸಿನ ನಂಟು” ಎಂದು ಕರೆಯಬೇಕು — ಅಲ್ಲಿ ಮಾತುಗಳಿಲ್ಲ, ಭೇಟಿಗಳಿಲ್ಲ, ಆದರೆ ಭಾವನೆಗಳಿವೆ. ಒಬ್ಬರ ನೆನಪು ಮತ್ತೊಬ್ಬರ ಮೌನದಲ್ಲಿ ಬೆರೆತು ಉಳಿದಾಗ, ಅದು ಪ್ರೀತಿಗಿಂತಲೂ ನಿಜವಾದದ್ದು ಅನ್ನಿಸುತ್ತದೆ.

ಈಗ ನನ್ನ ಬಳಿಯಿರುವುದು ಕೇವಲ ಅವಳ ನೆನಪುಗಳು ಮಾತ್ರ. ಅವಳ ನಗು, ಅವಳ ಧ್ವನಿ, ಅವಳ ಕೋಪ — ಇವುಗಳೆಲ್ಲಾ ಇನ್ನೂ ಮನಸ್ಸಿನೊಳಗೆ ಪ್ರತಿಧ್ವನಿಸುತ್ತಿವೆ. ಇಂದಿಗೂ ಅವಳ ಇಷ್ಟವಾದ ಹಾಡು “ಮಧುರ ಮನ ಮೋಹಿನಿ” ಕೇಳಿದಾಗ, ಅವಳ ನೆನಪು ಕಣ್ಣ ಮುಂದೆ ಮೂಡುತ್ತದೆ. ಅವಳ ಮಾತುಗಳು, ನಗು, ಹಾಗೂ ಆ ಕ್ಷಣಗಳು — ಎಲ್ಲವೂ ಕಾಲದ ಅಂತರದಲ್ಲೂ ಅಳಿಸದ ಚಿತ್ರಗಳಂತಿವೆ.

ಒಂದು ದಿನ ಸೀರೆ ಧರಿಸಿ ಕ್ಯಾಫೆಯಲ್ಲಿ ಭೇಟಿಯಾಗುತ್ತೇನೆ ಎಂದು ಅವಳು ಹೇಳಿದ್ದಳು. ಇಂದಿಗೂ ಆ ಕ್ಯಾಫೆಗೆ ಹೋದಾಗ, ಅವಳ ನಿರೀಕ್ಷೆಯಲ್ಲಿ ಕುಳಿತೇ ಇರುತ್ತೇನೆ. ಜನರು ಬರುತ್ತಾರೆ, ಹೋಗುತ್ತಾರೆ, ಆದರೆ ನನ್ನ ಕಣ್ಣುಗಳು ಇನ್ನೂ ಅವಳ ಹುಡುಕಾಟದಲ್ಲೇ ಇರುತ್ತವೆ. ಇದು ಹುಚ್ಚು ಅಲ್ಲವೇ ಎಂದು ನನಗೆ ಗೊತ್ತಿಲ್ಲ — ಆದರೆ ಆಕೆಯ ನೆನಪಿನಲ್ಲಿ ಬದುಕುವ ಈ ಹಂಬಲವೇ ಈಗ ನನ್ನ ನಿಜವಾದ ವಾಸ್ತವವಾಗಿದೆ.

ಇಂದು ಅವಳು ಎಲ್ಲಿದ್ದಾಳೋ ತಿಳಿಯದು. ಆದರೆ ಒಂದೇ ಆಶೆ — ಯಾವಾಗಲಾದರೂ ಈ ಸಾಲುಗಳು ಅವಳ ಕಣ್ಣಿಗೆ ಬೀಳಲಿ. ಅವಳು ಓದಲಿ, ಒಂದು ಕ್ಷಣವಾದರೂ ನೆನಪಿಸಿಕೊಳ್ಳಲಿ, ನಮ್ಮಿಬ್ಬರ ಆ ಚಿಕ್ಕ ಕಥೆಯನ್ನು. ಕೇವಲ ಒಂದು ಸಂದೇಶದಿಂದ ಆರಂಭವಾದ ಆ ಪರಿಚಯ, ನನ್ನ ಜೀವನದ ಅತ್ಯಂತ ಸುಂದರ ಅಧ್ಯಾಯವಾಯಿತು.
ಆಶೆಯೇ ಉಳಿದರೂ ಅದು ಸಾಕು — ಏಕೆಂದರೆ ಕೆಲವು ಭೇಟಿಗಳು ಎಂದಿಗೂ ಮುಗಿಯುವುದಿಲ್ಲ, ಅವು ಮನಸ್ಸಿನೊಳಗೆ ಶಾಶ್ವತವಾಗಿಯೇ ಇರುತ್ತವೆ.

ನೀನು ಎಲ್ಲಿಯೇ ಇದ್ದರೂ — ಹುಷಾರು.

Similar Posts

  • ತೀರ ಸಾಗರದಲ್ಲಿನ ಅವಳ ಹೆಜ್ಜೆ ಗುರುತು

    ಪ್ರಶಾಂತ ಸಾಗರದ ಅಲೆಯಂತೆ ಬಂದೆ ನೀನು ಮನದೊಳಗೆ,ಆಕಾಶ ನೀಲಿಯೋ, ಸಾಗರ ನೀಲಿಯೋ — ಅರಿಯೇನಾ ಈ ಬೆಸುಗೇ.ಇದು ಪ್ರೀತಿಯೋ, ಸ್ನೇಹವೋ? ಅರಿಯಲು ಹಂಬಲಿಸತಿರಲು,ಯಾಕೆ ಕೈ ಬಿಟ್ಟು ಹೋದೆ ನೀನು ಕೊನೆಗೆ…!! ಮನುಷ್ಯನ ಭಾವನೆಗಳು ಮತ್ತು ನೀಲಿ ಸಮುದ್ರದ ಪ್ರಶಾಂತತೆಗೆ ಏನು ಸಂಬಂಧ ಎಂಬ ಪ್ರಶ್ನೆ ನನಗೆ ಆಗಾಗ ಬರುತ್ತದೆ; ಸಮುದ್ರದ ಅಲೆಗಳು ಒಂದರ ಹಿಂದೊಂದು ದಡಕ್ಕೆ ಸೇರಿ ಕರಗುವಂತೆ ನೆನಪುಗಳು ಮತ್ತು ಭಾವನೆಗಳು ಮನಸ್ಸಿನ ಮಡಿಲಿಗೆ ಉಕ್ಕಿ ಸೇರುತ್ತವೆ. ಅವು ಹೃದಯವನ್ನು ತುಂಬುತ್ತ, ಸಮುದ್ರದ ದಡದಲ್ಲಿ ಕಾಲ…

Leave a Reply

Your email address will not be published. Required fields are marked *