ತೀರ ಸಾಗರದಲ್ಲಿನ ಅವಳ ಹೆಜ್ಜೆ ಗುರುತು

ಪ್ರಶಾಂತ ಸಾಗರದ ಅಲೆಯಂತೆ ಬಂದೆ ನೀನು ಮನದೊಳಗೆ,
ಆಕಾಶ ನೀಲಿಯೋ, ಸಾಗರ ನೀಲಿಯೋ — ಅರಿಯೇನಾ ಈ ಬೆಸುಗೇ.
ಇದು ಪ್ರೀತಿಯೋ, ಸ್ನೇಹವೋ? ಅರಿಯಲು ಹಂಬಲಿಸತಿರಲು,
ಯಾಕೆ ಕೈ ಬಿಟ್ಟು ಹೋದೆ ನೀನು ಕೊನೆಗೆ…!!

ಮನುಷ್ಯನ ಭಾವನೆಗಳು ಮತ್ತು ನೀಲಿ ಸಮುದ್ರದ ಪ್ರಶಾಂತತೆಗೆ ಏನು ಸಂಬಂಧ ಎಂಬ ಪ್ರಶ್ನೆ ನನಗೆ ಆಗಾಗ ಬರುತ್ತದೆ; ಸಮುದ್ರದ ಅಲೆಗಳು ಒಂದರ ಹಿಂದೊಂದು ದಡಕ್ಕೆ ಸೇರಿ ಕರಗುವಂತೆ ನೆನಪುಗಳು ಮತ್ತು ಭಾವನೆಗಳು ಮನಸ್ಸಿನ ಮಡಿಲಿಗೆ ಉಕ್ಕಿ ಸೇರುತ್ತವೆ. ಅವು ಹೃದಯವನ್ನು ತುಂಬುತ್ತ, ಸಮುದ್ರದ ದಡದಲ್ಲಿ ಕಾಲ ಕಳೆದಂತೆ ನಿರಾಳತೆಯಲ್ಲೇ ಕರಗುತ್ತವೆ. ಹೀಗೇ ಭಾವನೆಗಳ ಅಲೆಗಳಲ್ಲಿ ತೇಲಿ ಕಾಲ ಮರೆತು ಕುಳಿತಿದ್ದ ನನಗೆ, ಹಠಾತ್ ಎಚ್ಚರ ತಂದದ್ದು ಆಟವಾಡುತ್ತಿದ್ದ ನನ್ನ ಮಗಳ ಕರೆಯುವ ಧ್ವನಿ.

ಅವಳ ಕಡೆ ನೋಡಿದಾಗ ನನಗೆ ಕಾಣಿಸಿದ್ದು ನನ್ನ ಪುಟ್ಟ ಮಗಳ ಹೆಜ್ಜೆ ಗುರುತುಗಳು, ಆದರೆ ಅದರ ಭಾವದಲ್ಲಿ ಬಂದದ್ದು ಹಲವು ವರ್ಷಗಳ ಹಿಂದೆ ಅವಳು ಬಿಟ್ಟು ಹೋದ ಹೆಜ್ಜೆ ಗುರುತುಗಳೇ. ಮಗಳಿಗೆ ಒಬ್ಬಳೇ ಆಟವಾಡಿ ಬೇಸರವಾಗಿ ಏನೋ, ನನ್ನ ಬಳಿಗೆ ಬಂದು ಕೇಳಿದಳು: “ಅಪ್ಪಾ, ನನಗೆ ‘ಅನು’ ಅಂತ ಯಾಕೆ ಹೆಸರು ಇಟ್ಟೆ?” ಅಂತೆ. ಮಕ್ಕಳ ಪ್ರಶ್ನೆಗಳಿಗೂ, ಅವರ ಕುತೂಹಲಕ್ಕೂ ಮಿತಿ ಎನ್ನುವುದೇ ಇಲ್ಲ. ಇಷ್ಟು ದಿನ ನನ್ನ ಮನದೊಳಗೆ ಬಚ್ಚಿಟ್ಟುಕೊಂಡಿದ್ದ ಕಥೆಯನ್ನು ಮಗಳಿಗೆ ಹೇಳುವಂತೆ ಅನಿಸಿತು. ನಾನು ಕಥೆ ಹೇಳಲು ಶುರು ಕೂಡಾ ಮಾಡಿಬಿಟ್ಟೆ.

ಅದು ನನ್ನ ಕಾಲೇಜಿನ ಮೊದಲ ದಿನ. ಹೊಸ ತಾಣ, ಹೊಸ ಹುಮ್ಮಸ್ಸು, ಹೊಸ ಪರಿಚಯ—ಎಲ್ಲವೂ ಒಂದೇ ದಿನದಲ್ಲಿ ಹೊಸದಾಗಿ ತೋರುತ್ತಿತ್ತು. ಕ್ಯಾಂಟೀನ್‌ನಲ್ಲಿ ತಿಂಡಿ ತಿನ್ನಲು ಹೋದ ನನಗೆ ಹಿಂದುಗಿನಿಂದ ಒಂದು ಕೋಮಲ ಧ್ವನಿ ಕೇಳಿಸಿತು: “Excuse me, can you please help me where is the academic block?” ಅಂತಾ. ನಾನು ಹಿಂದು ತಿರುಗಿ ನೋಡಿದಾಗ ನನಗೆ ಮೊದಲು ಕಾಣಿಸಿದ್ದು ಅವಳ ಕೊಮಲಕಣ್ಣುಗಳು. ಅದು ಸಂಕೋಚವೋ, ಹೆದರಿಕೆಯೋ, ಮೊದಲ ಪರಿಚಯದ ಸವಿಯೋ—ಯಾವುದು ಎಂಬುದು ನನಗೆ ಗೊತ್ತಿಲ್ಲ. ಆದರೆ ಹೃದಯದ ಬಡಿತ ಮಾತ್ರ ತುಸು ಜೋರಾಗಿತ್ತು.

ತಿಳಿ ನೀಲಿ ಬಣ್ಣದ ಕುರ್ತಾ ಧರಿಸಿದ್ದ ಅವಳು ನೋಡಲು ಸರಳವಾಗಿದ್ದಳು. ಅವಳ ಹಣೆಯ ಮೇಲಿದ್ದ ಕೆಂಪು ಬಿಂದಿ ಅವಳ ಅಂದಕ್ಕೆ ಇನ್ನೊಂದು ಕಳೆ ತಂದಂತೆ ಕಂಡಿತು. ನಮ್ಮಿಬ್ಬರ ನಡೆಯಲ್ಲಿ ಸ್ವಲ್ಪ ಸಂಕೋಚ, ಸ್ವಲ್ಪ ಮೌನ—ಹೇಳದೆ ಉಳಿದ ರಾಗದಂತೆ ಕ್ಷಣಗಳು ಹರಿಯುತ್ತಿದ್ದವು. ಕ್ಷಣ ಮಾತ್ರಕ್ಕೆ ಏನು ಹೇಳಬೇಕು ಎಂಬುದು ಗೊತ್ತಾಗದೆ ನಾನು ಅಲ್ಲಿ ನಿಂತು ಕೈಯೆತ್ತಿ ಸೂಚಿಸಿದೆ. ಅವಳು “Thanks” ಎಂದು ಹೇಳಿ, ಅದೇ ದಿಕ್ಕಿನಲ್ಲಿ ನಿಧಾನವಾಗಿ ನಡೆದುಕೊಂಡು ಹೋದಳು.

ಮರುದಿನದ ತರಗತಿಗೆ (ಕ್ಲಾಸ್‌ಗೆ) ಹೋದಾಗಲೇ ಗೊತ್ತಾಗಿದ್ದು, ಅವಳು ಕೂಡ ಪ್ರಥಮ ವರ್ಷದ (First Year) ಮೆಕ್ಯಾನಿಕಲ್ ವಿದ್ಯಾರ್ಥಿನಿ ಎಂದು. ಬರೀ ಹುಡುಗರು ತುಂಬಿದ ವಿಭಾಗದಲ್ಲಿ (ಬ್ರ್ಯಾಂಚ್‌ನಲ್ಲಿ) ಅವಳೊಂದು ಕೈಗೆ ಸಿಗದ ನಕ್ಷತ್ರದ ಹಾಗೆ ಇದ್ದಳು. ಅವಳದ್ದು ತುಂಬಾ ಸಂಕೋಚದ ಸ್ವಭಾವ; ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಮೋಜು ಇರಲಿಲ್ಲ. ಬಡತನದ ಮನೆಯಿಂದ ಬಂದ ಅವಳಿಗೆ, ತನ್ನ ಓದು ಒಂದೇ ಮುಖ್ಯ ಗುರಿಯಾಗಿತ್ತು. ಅದು ಅವಳ ನಗೆಯೋ, ಅಂದವೋ, ಸರಳತೆಯ ಸ್ವಭಾವವೋ ಗೊತ್ತಿಲ್ಲ, ಆದರೆ ಅವಳು ನನಗೆ ತುಂಬಾ ವಿಶೇಷ ವ್ಯಕ್ತಿ ಎಂದು ಅನಿಸಿತು.

ನಾನೇನೋ ಭಾವನೆಗಳ ಕಡಲಲ್ಲಿ ಮುಳುಗಿ ಕಥೆ ಹೇಳುತ್ತಲೇ ಇದ್ದೆ. ಭಾವನೆಗಳ ಅರ್ಥ ತಿಳಿಯದ ಆ ಚಿಕ್ಕ ಕಂದಮ್ಮಳಿಗೆ ಹೇಗೆ ಅರ್ಥವಾಗಬೇಕು ಹೇಳಿ? ನನ್ನ ಕಥೆ ಬೇಜಾರಾಯಿತೋ, ಅರ್ಥವಾಗಲಿಲ್ಲವೋ, ಮನಸ್ಸು ಅಲ್ಲೇ ಮಿಠಾಯಿ ಮಾರುವವನ ಕಡೆ ತಿರುಗಿತೋ ಏನೋ, ಮಗಳು ಹೇಳಿದಳು, “ಅಪ್ಪಾ, ಹಸಿವಾಗಿದೆ” ಎಂದು. ಪಾಪ, ಮಗುವಿನ ಹಸಿವನ್ನು ಅರಿಯದ ನನ್ನನ್ನೇ ನಾನು ದೂಷಿಸಿಕೊಂಡು, ಅವಳ ಪುಟ್ಟ ಕೈ ಹಿಡಿದು, ಅವಳ ಪುಟ್ಟ ಹೆಜ್ಜೆಗಳೊಂದಿಗೆ ಹೊರಟೆವು ಮಿಠಾಯಿ ಅಂಗಡಿಯ ಕಡೆ. ಉಳಿದ ಕಥೆ ಕಥೆಯಾಗಿಯೇ ನನ್ನ ಮನಸ್ಸಿನಲ್ಲಿ ಉಳಿಯಿತು.

Similar Posts

  • ಹೇಳದೇ ಹೋದ ವಿದಾಯ

    ನಾನೊಬ್ಬ ಭಾವಗಳ ಪರಿಚಯವಿಲ್ಲದ ನಿರ್ಭಾವಿಅವಳೊಂದು ಹೃದಯದ ಮಾತು ನೇರವಾಗಿ ಕಣ್ನಲ್ಲಿ ಹೊಳೆಯುವ ಚಿಲುಮೆಇಬ್ಬರ ನಡುವೆ ಮೂಡಿದೆ ಹೊಸ ಅಧ್ಯಾಯ;ಹೇಳು… ಯಾಕೆ ನೀ ಬಿಟ್ಟು ಹೋದೆಯೆ? ಹೇಳದೇ ವಿದಾಯ… ನಮ್ಮ ಜೀವನದಲ್ಲಿ ತುಂಬ ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಬಂದು, ಹೋದರೂ ಹೋಗದಂತಹ ಜನ ಕೆಲವೇ ಮಂದಿ. ಅಂತಹ ಜನರಲ್ಲಿ ಮೊದಲಿಗೆ ಬರುವಳೆ ಈ ಹುಬ್ಬಳ್ಳಿ ಹುಡುಗಿ — ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ, ಆದರೆ ಅವಳ ಹೃದಯದಲ್ಲಿ ಹುಬ್ಬಳ್ಳಿಗೆ ಅಪಾರ ಪ್ರೀತಿ. ಅವಳ ಅಮ್ಮನ ಊರು ಹುಬ್ಬಳ್ಳಿ, ಆ…

Leave a Reply

Your email address will not be published. Required fields are marked *